ಆಷಾಢಮಾಸ ಬಂದೀತಮ್ಮ

ಜಾನಪದ

ಆಷಾಢಮಾಸ ಬಂದೀತಮ್ಮ

ತೌರಿಂದ ಅಣ್ಣಾ ಬರಲಿಲ್ಲ

ಎಷ್ಟು ನೆನೆಯಾಲಿ ಅಣ್ಣಾನ ದಾರಿಯ

ಸುವ್ವನಾರೀ ಸುವ್ವೋನಾರಿ ||

ಅರಕೆರೆ ಬನ್ನೂರು ಅದೆ ನನ್ನ ತವರೂರು

ಸರಕಾನೆ ಎದ್ದು ಬರುತೀಯೆ | ಅಣ್ಣಯ್ಯ

ಸರಿ ಕಾಣೋ ನಿನ್ನ ದೊರೆತಾನ ||

ಕೆಂದೆತ್ತು ಕೈಯಲ್ಲಿ ಕೆಂಪಂಗಿ ಮೈಯಲ್ಲಿ

ಚಿನ್ನದ ಬಾವಲಿಯ ತಕ್ಕೊಂಡು | ಬರುತಾನೆ

ಅಣ್ಣಯ್ಯ ತಂಗೀಯ ಕರೆಯೋಕೆ ||

ತವರೂರು ದಾರೀಲಿ ತೆಗೆಸಣ್ಣ ಬಾವಿಯ

ಅಕ್ಕ ತಂಗೀರು ತಿರುಗಾಡೋ | ದಾರೀಲಿ

ತೆಗೆಸಣ್ಣ ಕಲ್ಯಾಣದ ಬಾವೀಯ ||

ತೌರೂರು ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ

ಸಾಸಿವೆಯಷ್ಟು ಮರಳಿಲ್ಲ | ದಾರೀಲಿ

ಬಿಸಿಲಿನ ಬೇಗೆಯ ಸುಡಲಿಲ್ಲ ||